ವಿಜಯಪುರ : ಪತ್ರಕರ್ತ ಪರಶುರಾಮ ಶಿವಶರಣ ಅವರ ಮನೆಗೆ ತೆರಳಿ ಜೀವಬೆದರಿಕೆ ಒಡ್ಡಿದ ಅಕ್ಕಿ ಮಾಫಿಯಾ ಆರೋಪಿಗಳ ಗೂಂಡಾವರ್ತನೆಯನ್ನು ದಲಿತ ಸ್ವರಾಜ್ಯ ಸೇನೆ -ಕರ್ನಾಟಕ ಸಂಘಟನೆ ಅಧ್ಯಕ್ಷ ಗೌಡಪ್ಪ ಬಡಿಗೇರ ಅವರು ತೀವ್ರವಾಗಿ ಖಂಡಿಸಿದ್ದಾರೆ.
ಸರ್ಕಾರದ ‘ಅನ್ನಭಾಗ್ಯ’ ಯೋಜನೆಯ ಅಕ್ಕಿ ಕಾಳಸಂತೆ ಹಾಗೂ ಅಕ್ರಮ ದಂಧೆಯ ಕುರಿತು ಜವಾಬ್ದಾರಿಯುತವಾಗಿ ತನಿಖಾ ವರದಿ ಪ್ರಕಟಿಸಿದ್ದ ಪತ್ರಕರ್ತನ ಮನೆಗೆ ಅಕ್ರಮವಾಗಿ ಪ್ರವೇಶಿಸಿ, ಕುಟುಂಬಸ್ಥರಿಗೆ ಭೀತಿ ವಾತಾವರಣ ಸೃಷ್ಟಿಸಿ ಜೀವ ಬೆದರಿಕೆ ಹಾಕಿರುವುದು ಅತ್ಯಂತ ಖಂಡನೀಯ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ತರುವಂತಹ ಕೃತ್ಯವಾಗಿದೆ ಎಂದು ತೀವ್ರವಾಗಿ ಖಂಡನೆ ವ್ಯಕ್ತಪಡಿಸಿದ್ದಾರೆ.
ಮಾಧ್ಯಮ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿದ್ದು, ಸತ್ಯ ಬಿತ್ತರಿಸುವುದು ಅದರ ಕಾರ್ಯವಾಗಿದೆ. ಸಮಾಜವು ಪತ್ರಕರ್ತರ ಬೆನ್ನಿಗೆ ಯಾವಾಗಲೂ ಸದಾ ನಿಲ್ಲುವುದರ ಮೂಲಕ ಅವರಿಗೆ ಸ್ಥೈರ್ಯ ತುಂಬಬೇಕಾಗಿದೆ ಎಂದು ಹೇಳಿದರು.
ಸಮಾಜದಲ್ಲಿನ ಅಕ್ರಮ, ಭ್ರಷ್ಟಾಚಾರಗಳನ್ನು ಬಯಲಿಗೆಳೆಯಲು ಜೀವದ ಹಂಗು ತೊರೆದು ಕಾರ್ಯನಿರ್ವಹಿಸುವ ಪತ್ರಕರ್ತರಿಗೆ ಸೂಕ್ತ ರಕ್ಷಣೆ ನೀಡುವುದು ಆಡಳಿತ ಯಂತ್ರದ ಕರ್ತವ್ಯವಾಗಿದೆ. ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಗಳು ಹಾಗೂ ಪೊಲೀಸ್ ಇಲಾಖೆ ವಿಳಂಬ ಮಾಡದೆ ಆರೋಪಿಗಳನ್ನು ತಕ್ಷಣವೇ ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
