ವಿಜಯಪುರ: ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಅನ್ನ ಭಾಗ್ಯ ಅಕ್ಕಿ ಮಾಫಿಯಾ ಕುರಿತು ರಾಜ್ಯ ಮಟ್ಟದ ಪತ್ರಿಕೆಯಲ್ಲಿ ವಿಶೇಷ ವರದಿ ಬರೆದಿದ್ದಕ್ಕೆ, ಪತ್ರಕರ್ತನ ಮನೆಗೆ ಬಂದು ಗೂಂಡಾ ವರ್ತನೆ ತೋರಿ, ಜೀವಬೆದರಿಕೆ ಹಾಕಿದ ಅಕ್ಕಿ ಮಾಫಿಯಾದ ಆರೋಪಿಗಳಿಬ್ಬರ ಮೇಲೆ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.
ಗುಡುಲಾಲ್ ತುಬಾಕೆ ಹಾಗೂ ಅಲ್ತಾಫ್ ಪುಣೇಕರ ಗೂಂಡಾ ವರ್ತನೆ ತೋರಿದ ಆರೋಪಿಗಳಾಗಿದ್ದಾರೆ. ಪತ್ರಕರ್ತ ಪರಶುರಾಮ ಶಿವಶರಣ ಅವರು, ಆ.20, 2026 ರ ಸಂಚಿಕೆಯಲ್ಲಿ ರಾಜ್ಯ ಮಟ್ಟದ ಪತ್ರಿಕೆ ಹೊಸ ದಿಗಂತದಲ್ಲಿ ‘ಬೇರು ಬಿಟ್ಟ ಅಕ್ರಮ ದಂಧೆಕೋರರ ಜಾಲ, ಕಾಳಸಂತೆಕೋರರಿAದ ಮಹಾರಾಷ್ಟ್ರಕ್ಕೆ ಸಾಗಣೆ, ಅನ್ನಭಾಗ್ಯ ಅಕ್ಕಿ ಖದೀಮರಿಗೆ ವಿಜಯಪುರ ಸ್ವರ್ಗ’ ಎಂಬ ಶಿರ್ಷಿಕೆಯಡಿ ವಿಶೇಷ ವರದಿ ಬರೆದಿದ್ದಕ್ಕೆ, ಅಕ್ಕಿ ಮಾಫಿಯಾದ ಆರೋಪಿಗಳಾದ ಗುಡುಲಾಲ್ ತುಬಾಕೆ ಹಾಗೂ ಅಲ್ತಾಫ್ ಪುಣೇಕರ ಈ ಇಬ್ಬರು ಪತ್ರಕರ್ತ ಪರಶುರಾಮ ಶಿವಶರಣ ಮನೆಯಲ್ಲಿ ಇಲ್ಲದ ವೇಳೆ ಅವರ, ನಗರದ ಶಿಕಾರಖಾನೆ ಮನೆಗೆ ಸೋಮವಾರ ಸಂಜೆ 4 ಗಂಟೆಗೆ ಬಂದು, ಗೂಂಡಾ ವರ್ತನೆ ತೋರಿ, ನಮ್ಮ ಅಕ್ಕಿ ಮಾಫಿಯಾ ಬಗ್ಗೆ ಬರೆದ ಪತ್ರಕರ್ತ ಅಂವ ಎಲ್ಲಿದ್ದಾನ, ನಾವು ಎಲ್ಲಾ ಆಫೀಸ್ ದವರಿಗೆ ಮಂತ್ಲಿ ಕೊಡತಿವಿ, ನಮ್ಮ ಹಿಂದ ಕೆಲ ರಾಜಕಾರಣಿ ಇದಾರ, ಲೀಡರ್ ಇದ್ದಾರ, ಹೋರಾಟಗಾರರು ಇದ್ದಾರ ಸುಮ್ನೆ ಧಿಮಾಕ ಮಾಡಬ್ಯಾಡ್ರಿ, ನಿಮ್ದು ಎಷ್ಟ ತಗೊತ್ತೀರಿ ತಗೊಂಡು ಇದ್ದರ ಚಲೋ ಆಗ್ತದ, ಇಲ್ಲಾಂದ್ರ ನಿಮ್ಗ ಏನ ಮಾಡಬೇಕು ಗೊತೈತಿ ಅಂತ ಅವಾಚ್ಯ ಪದಗಳಿಂದ ಜಾತಿ ನಿಂದನೆ ಮಾಡಿ, ಜೀವಬೆದರಿಕೆ ಒಡ್ಡಿ, ಮನೆಯ ಎದುರು ಭಯ, ಭೀತಿ ಮೂಡಿಸಿದ್ದಾರೆ. ಈ ಹಿನ್ನೆಲೆ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾದ ಹಿನ್ನೆಲೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
