ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕು ಮೋರಗೇರಿ ಗ್ರಾಮದ ಮಾದಿಗ ಸಮಾಜದ ವಿದ್ಯಾರ್ಥಿನಿ ಕುಮಾರಿ ದುರುಗಮ್ಮ ಉತ್ತಂಗಿ ಅವರು ದೇಶದ ಅತ್ಯುನ್ನತ ಪರೀಕ್ಷೆಯಾದ ನೀಟ್ ಪರೀಕ್ಷೆಯಲ್ಲಿ ಪಾಸಾಗಿ ಬೆಂಗಳೂರಿನ ಸಪ್ತಗಿರಿ ಮೆಡಿಕಲ್ ಕಾಲೇಜಿನಲ್ಲಿ ಎಂ ಬಿ ಬಿ ಎಸ್ ಪ್ರವೇಶ ಪಡೆದಿರುವುದು ಅತ್ಯಂತ ಹೆಮ್ಮೆಯ ವಿಷಯ.
ಹಾಗಾಗಿ ಹಗರಿಬೊಮ್ಮನಹಳ್ಳಿ ತಾಲೂಕು ಮಾದಿಗ ಸಮಾಜ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ ( ಪ್ರೊ ಬಿ ಕೃಷ್ಣಪ್ಪನವರು ಸ್ಥಾಪಿಸಿದ ) ಪದಾಧಿಕಾರಿಗಳು ಮೋರಗೇರಿ ಗ್ರಾಮದ ವಿದ್ಯಾರ್ಥಿನಿಯ ಮನೆಗೆ ಭೇಟಿ ನೀಡಿ ಸನ್ಮಾನಿಸಿ ಅಭಿನಂದನೆ ತಿಳಿಸಿದರು. ಸನ್ಮಾನಿಸಿ ಮಾತನಾಡಿದ ತಾಲೂಕು ದಲಿತ ಸಂಘರ್ಷ ಸಮಿತಿ ಅಧ್ಯಕ್ಷರಾದ ಪರಶುರಾಮ್ ಹೆಗ್ಡಳ್ ಅವರು, ಅತ್ಯಂತ ಕಡು ಬಡತನದಲ್ಲಿ ಬೆಳೆದಿರುವ ವಿದ್ಯಾರ್ಥಿನಿ ಅನೇಕ ಸವಾಲುಗಳನ್ನು ಮೆಟ್ಟಿ ನಿಂತು ಶ್ರಮವಹಿಸಿ, ತಂದೆ ತಾಯಿ ಹಾಗೂ ಇಡೀ ಸಮಾಜ ಹೆಮ್ಮೆಪಡುವಂತ ಸಾಧನೆ ಮಾಡಿರುವುದು ಓದುವ ಮಕ್ಕಳಿಗೆ ಸ್ಫೂರ್ತಿಯಾಗಿದ್ದಾಳೆ ಎಂದು ತಿಳಿಸಿದರು. ನಂತರ ಮಾತನಾಡಿದ ದಲಿತ ಸಂಘರ್ಷ ಸಮಿತಿ ತಾಲೂಕು ಸಂಘಟನಾ ಸಂಚಾಲಕ ಮರಿಯಪ್ಪ ದಶಮಾಪುರ ಅವರು, ಕಳೆದ ಮೂವತ್ತು ವರ್ಷಗಳ ಒಳ ಮೀಸಲಾತಿ ಹೋರಾಟದ ಪ್ರಥಮ ಫಲ ಕುಮಾರಿ ದುರುಗಮ್ಮ ಅವರಿಗೆ ಎಂ ಬಿ ಬಿ ಎಸ್ ಸೀಟ್ ಸಿಕ್ಕಿರುವುದು. ಹಾಗಾಗಿ ಪೋಷಕರು ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿ ಎಂದರು.
